Search This Blog

Tuesday, December 24, 2024

ಅಧಿವೇಶನ ಅವಧಿ ಲೆಕ್ಕಕ್ಕಷ್ಟೇ! ಈ ಬಾರಿ ನಡೆದಿದ್ದು 29 ದಿನ ಮಾತ್ರ

ಅಧಿವೇಶನ ಅವಧಿ ಲೆಕ್ಕಕ್ಕಷ್ಟೇ! ಈ ಬಾರಿ ನಡೆದಿದ್ದು 29 ದಿನ ಮಾತ್ರ


ವಿಧಾನಸಭಾ ಅಧಿವೇಶನ ವರ್ಷಕ್ಕೆ 60 ದಿನ ನಡೆಯಬೇಕು ಎಂಬುದು ಬಹುವರ್ಷದ ಆಶಯ. ಆದರೆ, ಕಳೆದ 42 ವರ್ಷಗಳಲ್ಲಿ ಈ ಆಶಯ ಈಡೇರಿದ್ದು 2000ನೇ ಇಸವಿಯಲ್ಲಿ ಮಾತ್ರ.

ಆದರೆ 7 ಕೋಟಿ ಜನರ ಧ್ವನಿಯಾಗಬೇಕಾದ ಅಧಿವೇಶನದ ದಿನಗಳು ಮಾತ್ರ ಕುಗ್ಗುತ್ತಿರುವುದು ವಿಪರ್ಯಾಸ. 1952ರಿಂದ 82ವರೆಗೆ ಅತಿಹೆಚ್ಚು 1,999 ದಿನಗಳ ಅಧಿವೇಶನ ನಡೆದಿದೆ. ಅದರಿಂದೀಚೆಗೆ 42 ವರ್ಷಗಳ ಇತಿಹಾಸದಲ್ಲಿ ಒಂದು ವರ್ಷ ಹೊರತುಪಡಿಸಿ ಒಮ್ಮೆಯೂ 60 ದಿನ ಅಧಿವೇಶನ ನಡೆದಿಲ್ಲ. ಈಗಾಗಲೇ 15 ಸರ್ಕಾರಗಳು ಬಂದು ಹೋಗಿವೆ. 16ನೇ ಸರ್ಕಾರ ಚಾಲ್ತಿಯಲ್ಲಿದೆ. ಆದರೆ 60 ದಿನಗಳ ಅಧಿವೇಶನ ಭರವಸೆಯಾಗಿಯೇ ಉಳಿದಿದೆ. 1952ರಿಂದ 72 ವರ್ಷದಲ್ಲಿ ಜನಸಂಖ್ಯೆ 7 ಕೋಟಿ ದಾಟಿದೆ. ಬಜೆಟ್ ಗಾತ್ರವೂ ಲಕ್ಷ ಕೋಟಿ ರೂ.ಮೀರಿದೆ. ಆದರೆ ರಾಜ್ಯದ ಸಮಸ್ಯೆಗಳು ಚರ್ಚೆಯಾಗಬೇಕಾದ ಹಾಗೂ ಅವುಗಳಿಗೆ ಪರಿಹಾರ ಕಲ್ಪಿಸಬೇಕಾದ ಅಧಿವೇಶನದ ಅವಧಿ ಕಡಿಮೆಯಾಗುತ್ತಿದೆ.


ಸದನ ಇತಿಹಾಸ: ಕೇವಲ 99 ಚುನಾಯಿತ ಶಾಸಕರಿದ್ದ ಕಾಲದಲ್ಲಿ 65ರಿಂದ 85 ದಿನಗಳವರೆಗೆ ನಡೆಯುತ್ತಿದ್ದ ಅಧಿವೇಶನ ದಿನಗಳ ಸಂಖ್ಯೆ 224 ಶಾಸಕರಾದ ಮೇಲೆ ಕುಸಿಯುತ್ತಿರುವುದು ವಿಪರ್ಯಾಸ. 1952ರಲ್ಲಿ 99 ಚುನಾಯಿತ ಸದಸ್ಯರು, ಒಬ್ಬರು ನಾಮನಿರ್ದೇಶಿತ ಸದಸ್ಯರು ಇದ್ದರು. 1957ರಲ್ಲಿ ಶಾಸಕರ ಸಂಖ್ಯೆ 208ಕ್ಕೆ ಏರಿತು. 1967ರಲ್ಲಿ 216ಕ್ಕೆ, 1978ರಲ್ಲಿ ಸದನದ ಬಲ 224ಕ್ಕೆ ಮುಟ್ಟಿತು. ಆರಂಭದಿಂದಲೂ ಸದನ ಇಂತಿಷ್ಟು ದಿನ ನಡೆಯಬೇಕೆಂಬ ನಿಯಮ ಇಲ್ಲದಿದ್ದರೂ ರಾಜ್ಯದ ಹಿತದೃಷ್ಟಿಯಿಂದ ಮೌಲ್ಯಯುತ ಚರ್ಚೆಗಳು ನಡೆಯುತ್ತಿದ್ದವು

.

1971ರಲ್ಲಿ 4 ದಿನ ಮಾತ್ರ: 1971ರಲ್ಲಿ ಕೇವಲ 4 ದಿನ ಅಧಿವೇಶನ ನಡೆದಿದ್ದರೆ, 1963ರಲ್ಲಿ ಎರಡು ಬಾರಿ ಅಧಿವೇಶನ ನಡೆದಿದ್ದರೂ ಬರೋಬ್ಬರಿ 98 ದಿನ ಕಲಾಪ ನಡೆದಿದೆ. ಸದನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಲುವಾಗಿ 60 ದಿನ ಅಧಿವೇಶನ ನಡೆಸಲು ನಿಯಮ ರೂಪಿಸಲಾಯಿತು. ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪ ನಿರ್ವಹಣೆ ಅಧಿನಿಯಮ 2002ರಂತೆ ವರ್ಷದಲ್ಲಿ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕು. ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾಗುವ ಅಧಿವೇಶನ 15 ದಿನಗಳು, ಬಜೆಟ್ ಸಂಬಂಧ 20 ದಿನ, ಮಳೆಗಾಲದ ಅಧಿವೇಶನ 15 ದಿನ. ಚಳಿಗಾಲದ ಅಧಿವೇಶನ 10 ದಿನ ನಡೆಸುವ ನಿಯಮ ರೂಪಿಸಲಾಯಿತು. ಅಧಿವೇಶನದ ದಿನಗಳು ಇನ್ನಷ್ಟು ಹೆಚ್ಚಾಗಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಆದರೆ ನಿಯಮ ರೂಪಿಸಿದ ಮೇಲೂ ಯಾವ ವರ್ಷವೂ ಗುರಿ ಮುಟ್ಟದೆ ನಿಯಮಗಳು ಕಡತಕ್ಕೆ ಸೀಮಿತವಾಗಿವೆ.


ವಿಪಕ್ಷ ಶಾಸಕರ ಸಂಖ್ಯೆ ವಿರಳ: 1952ರಿಂದ 82ರ ತನಕ 1999 ದಿನಗಳು ಅಧಿವೇಶನ ನಡೆದಿದೆ. ಈ ಅವಧಿಯಲ್ಲಿ ಆಡಳಿತ ಪಕ್ಷದ ಶಾಸಕರೇ ತುಂಬಿರುತ್ತಿದ್ದರು. ವಿಪಕ್ಷ ಶಾಸಕರು ಬೆರಳೆಣಿಕೆಯಷ್ಟು ಇರುತ್ತಿದ್ದರು. ಆದರೂ ದಿನಗಟ್ಟಲೆ ಸಮಸ್ಯೆಗಳ ಬಗ್ಗೆ, ಮೌಲ್ಯಯುತ ಚರ್ಚೆಗಳಿಗೆ ವೇದಿಕೆಯಾಗುತ್ತಿತ್ತು. ನಂತರದ ದಿನಗಳಲ್ಲಿ ಸಮರ್ಥ ವಿಪಕ್ಷ, ಕೆಲವೊಮ್ಮೆ ಸಮ್ಮಿಶ್ರ ಸರ್ಕಾರ ಇದ್ದರೂ ನಿಗದಿತ ಕಾಲ ಅಧಿವೇಶನ ನಡೆದಿಲ್ಲ. 2014-15ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅಧಿವೇಶನವನ್ನು 60 ದಿನ ನಡೆಸುವ ಬಗ್ಗೆ ಉತ್ಸುಕರಾದರೂ ನಂತರದ 10 ವರ್ಷದಲ್ಲಿ 5 ವರ್ಷ 50 ದಿನಗಳ ಗಡಿ ದಾಟಿತೇ ವಿನಃ 60 ದಿನಗಳ ಗಡಿ ಮುಟ್ಟಿಸಲು ಸಾಧ್ಯವಾಗಿಲ್ಲ.


ರಾಜ್ಯದ ಸಮಸ್ಯೆ, ಜನಸಾಮಾನ್ಯರ ಅಗತ್ಯಗಳು, ಶಾಸನ ರಚನೆ ಸೇರಿ ಎಲ್ಲ ಪರಿಹಾರಗಳಿಗೂ ಬಹುದೊಡ್ಡ ವೇದಿಕೆ ಸದನ. ಔಚಿತ್ಯಪೂರ್ಣ, ಪ್ರಜಾಪ್ರಭುತ್ವದ ಆಶಯದಂತೆ ಚರ್ಚೆ ನಡೆಯುವುದಾದರೆ ವರ್ಷದಲ್ಲಿ 90 ದಿನಕ್ಕೆ ವಿಸ್ತರಿಸಬೇಕು. ಆದರೆ 60 ದಿನ ಕೂಡ ನಡೆಯುತ್ತಿಲ್ಲ. ಅನಗತ್ಯ ವಾದ-ವಿವಾದದಿಂದ ಸಮಯ ವ್ಯರ್ಥವಾಗುತ್ತಿದೆ. ಶಾಸಕರೂ ಸದನಕ್ಕೆ ಹೀಗೆ ಬಂದು ಹಾಗೆ ಹೋಗುವಂತಾಗಿದೆ. ಅಧಿವೇಶನ ದಿನಗಳ ವಿಸ್ತರಣೆ, ಕಲಾಪದ ನಿರ್ವಹಣೆ ಕುರಿತು ಚಿಂತನೆ ಅಗತ್ಯ.


No comments: