Search This Blog

Tuesday, January 7, 2025

ವಿದ್ಯಾರ್ಥಿ ವೇತನ

ಪರಿಶಿಷ್ಟ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ಬಹುತೇಕ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಪರದಾಡುತ್ತಿದ್ದಾರೆ. ಮೂರು ವರ್ಷಗಳಿಂದ ರಾಜ್ಯ ಸರ್ಕಾರದಿಂದ ಬರೀ ಭರವಸೆ ಸಿಕ್ಕಿದೆಯೇ ಹೊರತು ವಿದ್ಯಾರ್ಥಿ ವೇತನ ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ ಬರುವ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸರಿಯಾಗಿ ಲಭ್ಯವಾಗಿಲ್ಲ.


'ಕೋವಿಡ್ ಸಮಸ್ಯೆಯಿಂದ ಎಂಜಿನಿಯರಿಂಗ್‌ ಮತ್ತಿತರ ಪದವಿಗಳ ಅವಧಿ ಕಡಿಮೆ ಮಾಡಲಾಯಿತು. ಆದರೆ, ವೈದ್ಯಕೀಯ ಶಿಕ್ಷಣದಲ್ಲಿ ಇದು ಸಾಧ್ಯವಾಗಲಿಲ್ಲ. ಪೂರ್ಣ ಅವಧಿ ಮುಗಿಸಲೇಬೇಕು ಎಂದು ಸರ್ಕಾರ ಆದೇಶ ಹೊರಡಿಸಿತು. ಅವಧಿ ಕಡಿಮೆ ಮಾಡಿದ ಪದವಿಗಳ ವಿದ್ಯಾರ್ಥಿ ವೇತನ ನಿಲ್ಲಿಸಲಾಯಿತು. ಅದರೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳ ವೇತನವೂ ನಿಲ್ಲಿಸಲಾಗಿದೆ. 2024ನೇ ಸಾಲಿಗೆ ಬರಬೇಕಿದ್ದ ₹55,500 ನಮ್ಮ ಕೈ ಸೇರಿಲ್ಲ' ಎಂಬುದು ವಿದ್ಯಾರ್ಥಿಗಳ ಅಳಲು.


'ರಾಜ್ಯದ ಖಾಸಗಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಇಂಥ ವಿದ್ಯಾರ್ಥಿಗಳ ಸಂಖ್ಯೆ 80 ಸಾವಿರಕ್ಕೂ ಹೆಚ್ಚಿದೆ. 7,000ಕ್ಕೂ ಹೆಚ್ಚು ಎಂಬಿಎ ಎಂಸಿಎ ಮತ್ತು ಎಂಟೆಕ್ ವಿದ್ಯಾರ್ಥಿಗಳು ಇದ್ದಾರೆ. ಶಿಷ್ಯವೇತನ ನಂಬಿ ಪ್ರವೇಶ ಪಡೆದವರು ಸಾಕಷ್ಟಿದ್ದಾರೆ. ಸರ್ಕಾರದ ಧೋರಣೆಯ ಕಾರಣ ರೈತರು, ಕೂಲಿ ಕಾರ್ಮಿಕರು, ಬಡವರ ಮಕ್ಕಳ ಉನ್ನತ ಶಿಕ್ಷಣ ಅಡಕತ್ತರಿಗೆ ಸಿಕ್ಕಿಕೊಂಡಿದೆ' ಎಂಬುದು ಹಲವರ ದೂರು.


'ಎರಡು ವರ್ಷಗಳ ಹಿಂದೆ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಶೇ 30ರಷ್ಟು ಮಂದಿಗೆ ಮಾತ್ರ ಹಣ ಬಂದಿದೆ. ಉಳಿದವರಿಗೆ ಕೈ ತಪ್ಪಿದೆ. ಇದಕ್ಕೆ ಸ್ಪಷ್ಟ ಕಾರಣವನ್ನೇ ನೀಡಿಲ್ಲ. ಕಳೆದ ವರ್ಷವಂತೂ ಎಲ್ಲರ ವಿದ್ಯಾರ್ಥಿ ವೇತನ ನಿಲ್ಲಿಸಲಾಗಿದೆ. ಈ ಬಗ್ಗೆ ಹೋರಾಡಿದರೂ ಕಿವಿಗೊಟ್ಟಿಲ್ಲ. ಸಚಿವ ಶಿವರಾಜ್ ತಂಗಡಗಿ ಅವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ' ಎಂದು ಎಐಡಿಎಸ್‌ಒ ಸಂಘಟನೆ ಜಿಲ್ಲಾ ಸಂಚಾಲಕ ಮಹಾಂತೇಶ ಬಿಳೂರ ತಿಳಿಸಿದರು.


ಇದರ ಬಗ್ಗೆ ಕೇಳಿದಾಗ, ಇಲಾಖೆ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು, 'ಸರ್ಕಾರ ಹಣ ಸಂದಾಯ ಮಾಡಿಲ್ಲ' ಎಂಬ ಉತ್ತರ ನೀಡಿದರು.


  ಮಹಾಂತೇಶ ಬಿಳೂರ ಜಿಲ್ಲಾ ಸಂಚಾಲಕ, ಎಐಡಿಎಸ್‌ಒ ಸಂಘಟನೆರಾಜ್ಯ ಸರ್ಕಾರ ಬೇರೆ ಯೋಜನೆ ಗಳಿಗೆ ಸಾವಿರಾರು ಕೋಟಿ ಸುರಿಯುತ್ತದೆ. ಶಿಕ್ಷಣಕ್ಕೆ ಆದ್ಯತೆ ನೀಡದೇ ವಿದ್ಯಾರ್ಥಿವೇತನ ನಿಲ್ಲಿಸಿದೆ.ಸುಮುಖ್‌ ಚೇತನ್‌ ಎಂಬಿಬಿಎಸ್‌ ವಿದ್ಯಾರ್ಥಿ, ಬೆಂಗಳೂರುಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಶುಲ್ಕವಿದ್ದಷ್ಟೇ ಶಿಷ್ಯವೇತನ ಬರುತ್ತಿತ್ತು. ಈಗ ಕಡಿತ ಮಾಡಲಾಗಿದೆ. ಅದನ್ನೂ ನೀಡಲು ವಿಳಂಬ ಮಾಡಲಾಗುತ್ತಿದೆ ಎಚ್.ಎಂ. ಅಂಜಲಿ ಪದವಿ ವಿದ್ಯಾರ್ಥಿನಿ, ಮೈಸೂರುಒಂದೆಡೆ ಶಿಷ್ಯವೇತನ ಕೊಡುತ್ತಿಲ್ಲ. ಇನ್ನೊಂದೆಡೆ ಕಾಲೇಜು ಶುಲ್ಕ ಕಟ್ಟಬೇಕು. ಸಂಕಷ್ಟದಿಂದ ಪಾರಾಗಲು ಪಾರ್ಟ್‌ ಟೈಮ್ ಕೆಲಸ ಮಾಡಬೇಕಾದ ಅನಿವಾರ್ಯ ಬಂದಿದೆ

No comments: